ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಯಾಕೆ ಸೇವನೆ ಮಾಡಬೇಕು ಗೊತ್ತೇ

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣನ್ನು ಯಾಕೆ ಸೇವನೆ ಮಾಡಬೇಕು ಗೊತ್ತೇ

 

ಆಯಾಯಾ ಋತುಮಾನಕ್ಕೆ ಅನುಗುಣವಾಗಿ ಹಣ್ಣುಗಳು ನಮಗೆ ಪ್ರಕೃತಿ ನೀಡುವ ದೇಣಿಗೆಯಾಗಿದೆ. ಇಂತಹ ಹಣ್ಣುಗಳು ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳನ್ನು ನೀಡುವುದು. ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾಗಿರುವ ಕಾರಣದಿಂದ ನೀರಿನಾಂಶವು ಅಧಿಕವಾಗಿರುವ ಹಣ್ಣುಗಳು ನಮಗೆ ಲಭ್ಯವಿದೆ. ಇದರಲ್ಲಿ ಪ್ರಮುಖವಾಗಿ ಕಲ್ಲಂಗಡಿ. ಕಲ್ಲಂಗಡಿ ಹಣ್ಣು ದೇಹಕ್ಕೆ ಮಾತ್ರವಲ್ಲದೆ ಚರ್ಮದ ಅರೋಗ್ಯವನ್ನು ಕಾಪಾಡುವುದು. ಯಾಕೆಂದರೆ ಇದರಲ್ಲಿ ಶೇ.93ರಷ್ಟು ನೀರಿನಾಂಶವಿದೆ. ಇದು ಚರ್ಮದಲ್ಲಿ ತೇವಾಂಶ ಕಾಪಾಡುವುದು ಮಾತ್ರವಲ್ಲದೆ, ಚರ್ಮವು ತಾಜಾ ಮತ್ತು ಕಾಂತಿಯುತವಾಗಿರುವಂತೆ ಮಾಡುವುದು.
ಇದರಲ್ಲಿ ವಿಟಮಿನ್ ಎ, ಇ, ಸಿ ಮತ್ತು ಬಿ6 ಮತ್ತು ಹಲವಾರು ಖನಿಜಾಂಶಗಳು ಇವೆ. ಕಲ್ಲಂಗಡಿ ಹಣ್ಣನ್ನು ನಿಮ್ಮ ಫೇಸ್ ಪ್ಯಾಕ್ ಮತ್ತು ಮಾಸ್ಕ್ ಆಗಿ ಬಳಸಿಕೊಳ್ಳಬಹುದು. ಇದರಿಂದ ತ್ವಚೆಗೆ ಕಾಂತಿ ಬರುವುದು. ಪ್ರತಿಯೊಬ್ಬರಿಗೂ ಚರ್ಮದಲ್ಲಿ ಮೊಡವೆ, ಸುಟ್ಟಚರ್ಮ, ಕಲೆಗಳು, ಒಣಚರ್ಮ ಇತ್ಯಾದಿ ಸಮಸ್ಯೆಗಳಿರುತ್ತದೆ. ಇವುಗಳಿಗೆಲ್ಲಾ ಒಂದೇ ಪರಿಹಾರವೆಂದರೆ ಅದು ಕಲ್ಲಂಗಡಿ. ನೀವು ಮುಂದಿನ ಸಲ ಕಲ್ಲಂಗಡಿ ಹಣ್ಣನ್ನು ತಿನ್ನಲು ಹೋದರೆ ಆಗ ತ್ವಚೆಯ ಬಗ್ಗೆ ಕೂಡ ಗಮನಹರಿಸಿ. ಕಲ್ಲಂಗಡಿ ಹಣ್ಣನ್ನು ತ್ವಚೆಗೆ ಯಾವ ರೀತಿ ಬಳಸಿಕೊಳ್ಳಬಹುದು ಎಂದು ಈ ಲೇಖನದಿಂದ ನೀವು ತಿಳಿಯಬಹುದು…

ಕಲ್ಲಂಗಡಿ ಮತ್ತು ಮೊಸರು

ಮೊಸರಿನಲ್ಲಿರುವಂತಹ ಲ್ಯಾಕ್ಟಿಕ್ ಆಮ್ಲವು ಸತ್ತ ಚರ್ಮವನ್ನು ತೆಗೆದುಹಾಕಲು ಪ್ರಮುಖ ಪಾತ್ರ ವಹಿಸುತ್ತದೆ. ನಿಯಮಿತವಾಗಿ ಇದನ್ನು ಬಳಸಿಕೊಂಡರೆ ಅದರಿಂದ ಯೌವನಯುತ ಮತ್ತು ಆರೋಗ್ಯಕಾರಿ ಚರ್ಮವು ನಿಮ್ಮದಾಗುವುದು. ಮೊಸರು ಮತ್ತು ಕಲ್ಲಂಗಡಿ ಮಿಶ್ರಣದಿಂದ ನಿಮ್ಮ ಚರ್ಮವು ತುಂಬಾ ಸುಂದರ ಹಾಗೂ ನಯವಾಗುವುದು. ಕಲ್ಲಂಗಡಿ ಜ್ಯೂಸ್ ಮತ್ತು ಒಂದು ಚಮಚ ಮೊಸರನ್ನು ಪಿಂಗಾಣಿಗೆ ಹಾಕಿ ಮಿಶ್ರಣ ಮಾಡಿ. ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಬಿಟ್ಟು ನೀರಿನಿಂದ ತೊಳೆಯಿರಿ.

ಕಲ್ಲಂಗಡಿ ಮತ್ತು ಜೇನುತುಪ್ಪ

ಬಣ್ಣ ಕಳೆದುಕೊಂಡಿರುವ ಮತ್ತು ಹಾನಿಗೊಳಗಾಗಿರುವ ಚರ್ಮವು ಬೇಗನೆ ಹಳೆ ರೂಪ ಪಡೆಯಬೇಕಾದರೆ ಆಗ ನೀವು ಈ ಫೇಸ್ ಮಾಸ್ಕ್ ಬಳಸಿಕೊಳ್ಳಿ. ಸಮ ಪ್ರಮಾಣದಲ್ಲಿ ಕಲ್ಲಂಗಡಿ ರಸ ಮತ್ತು ಜೇನುತುಪ್ಪ ಬೆರೆಸಿಕೊಳ್ಳಿ. ಮೊದಲಿಗೆ ಮುಖ ಸರಿಯಾಗಿ ತೊಳೆದುಕೊಂಡು ಒಣಗಿಸಿಕೊಳ್ಳಿ. ಈಗ ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ. 30 ನಿಮಿಷ ಬಳಿಕ ನೀರಿನಿಂದ ತೊಳೆಯಿರಿ.

ಕಲ್ಲಂಗಡಿ ಮತ್ತು ಅವಕಾಡೋ

ಇದರಲ್ಲಿ ಇರುವಂತಹ ವಿಟಮಿನ್ ಇ ಚರ್ಮವು ತುಂಬಾ ನಯವಾಗಿರುವಂತೆ ಮಾಡುವುದು. ಅವಕಾಡೋ ಮೊಡವೆ ಮತ್ತು ನೆರಿಗೆ ನಿವಾರಿಸುವುದು. ಒಂದು ಅಥವಾ ಎರಡು ತುಂಡು ಕಲ್ಲಂಗಡಿ ಹಣ್ಣು ತೆಗೆದುಕೊಳ್ಳಿ. ಇದನ್ನು ಪಿಂಗಾಣಿಗೆ ಹಾಕಿಕೊಂಡು ಅದಕ್ಕೆ ಅರ್ಧ ಅವಕಾಡೋ ಹಾಕಿಕೊಳ್ಳಿ. ಇದನ್ನು ಸರಿಯಾಗಿ ಹಿಚುಕಿಕೊಳ್ಳಿ ಅಥವಾ ರುಬ್ಬಿಕೊಳ್ಳಿ. ಇದನ್ನು ಈಗ ಮುಖ ತೊಳೆದುಕೊಂಡು ಹಚ್ಚಿಕೊಳ್ಳಿ. ಇದು 15 ನಿಮಿಷ ಕಾಲ ಹಾಗೆ ಇರಲಿ. ಬಳಿಕ ನೀರಿನಿಂದ ತೊಳೆಯಿರಿ.

ಕಲ್ಲಂಗಡಿ ಮತ್ತು ಸೌತೆಕಾಯಿ

ಕಲ್ಲಂಗಡಿಯಲ್ಲಿ ಇರುವಂತಹ ಕೆಂಪು ಅಂಶಗಳು ನೈಸರ್ಗಿಕವಾಗಿ ಬಿಸಿಲಿನಿಂದ ರಕ್ಷಣೆ ನೀಡುವುದು ಮತ್ತು ಬಿಸಿಲಿನಿಂದ ಆಗಿರುವ ಸುಟ್ಟ ಕಲೆಗಳನ್ನು ನಿವಾರಿಸುವುದು. ಸೌತೆಕಾಯಿಯು ಚರ್ಮಕ್ಕೆ ತಂಪು ನೀಡಿ ತೇವಾಂಶ ನೀಡುವುದು. ಒಂದು ಚಮಚ ಕಲ್ಲಂಗಡಿ ರಸ ಅಥವಾ ತಿರುಳನ್ನು ತೆಗೆದುಕೊಳ್ಳಿ. ಅದಕ್ಕೆ ಒಂದು ಚಮಚ ಸೌತೆಕಾಯಿ ರಸ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಈಗ ಮುಖಕ್ಕೆ ಹಚ್ಚಿಕೊಳ್ಳಿ. 20 ನಿಮಿಷ ಹಾಗೆ ಬಿಟ್ಟುಬಿಡಿ. ಬಳಿಕ ನೀರಿನಿಂದ ತೊಳೆಯಿರಿ.

ಕಲ್ಲಂಗಡಿ ಮತ್ತು ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ವಿಟಮಿನ್ ಬಿ ಸಂಕೀರ್ಣವಿದೆ. ಇದು ಮೊಡವೆಗಳಿಂದ ಆಗಿರುವಂತಹ ಉರಿಯೂತ ಕಡಿಮೆ ಮಾಡುವುದು. ಇದರಿಂದ ಕಲ್ಲಂಗಡಿ ಮತ್ತು ಬಾಳೆಹಣ್ಣು ಮಿಶ್ರಣ ಮಾಡಿದರೆ ಮೊಡವೆಗಳ ನಿವಾರಣೆ ಮಾಡಲು ಮತ್ತು ಚರ್ಮವು ತುಂಬಾ ನಯವಾಗಿರುವಂತೆ ಮಾಡುವುದು. ಒಂದು ಪಿಂಗಾಣಿಯಲ್ಲಿ ಎರಡು ಅಥವಾ ಮೂರು ಸಣ್ಣ ತುಂಡು ಕಲ್ಲಂಗಡಿ ಹಣ್ಣು, ಅರ್ಧ ಬಾಳೆಹಣ್ಣು ಹಾಕಿಕೊಂಡು ಸರಿಯಾಗಿ ಮಿಶ್ರಣ ಮಾಡಿ. ಈ ಫೇಸ್ ಮಾಸ್ಕ್ ನ್ನು ಮುಖ ಹಾಗೂ ಕುತ್ತಿಗೆಗೆ ಸರಿಯಾಗಿ ಹಚ್ಚಿಕೊಳ್ಳಿ. 15-20 ನಿಮಿಷ ಕಾಲ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ.

ಕಲ್ಲಂಗಡಿ ಮತ್ತು ಹಾಲು

ಹಾಲು ನೈಸರ್ಗಿಕದತ್ತವಾಗಿರುವ ಮೊಶ್ಚಿರೈಸರ್. ಇದು ಚರ್ಮದ ದೊಡ್ಡ ರಂಧ್ರಗಳನ್ನು ಕುಗ್ಗಿಸುವುದು. ಇದು ಬಿಸಿಲಿನಿಂದ ಸುಟ್ಟ ಕಲೆಗಳಿಗೆ ಮತ್ತು ಅದರ ಗಾಯಗಳಿಗೆ ಒಳ್ಳೆಯದು. ಒಂದು ಚಮಚ ಕಲ್ಲಂಗಡಿ ರಸ, ಒಂದು ಚಮಚ ಹಸಿ ಹಾಲು ತೆಗೆದುಕೊಳ್ಳಿ. ಹಸಿ ಹಾಲು ಸಿಗದೆ ಇದ್ದರೆ ಹಾಲಿನ ಪೌಡರ್ ಬಳಸಿ. ಎಲ್ಲವನ್ನು ಸರಿಯಗಿ ಮಿಶ್ರಣ ಮಾಡಿ. ಈ ಮಾಸ್ಕ್ ನ್ನು ಶುದ್ಧವಾಗಿರುವ ಮುಖಕ್ಕೆ ಹಚ್ಚಿಕೊಳ್ಳಿ. 20-25 ನಿಮಿಷ ಕಾಲ ಹಾಗೆ ಇರಲಿ. ಬಳಿಕ ನೀರಿನಿಂದ ತೊಳೆಯಿರಿ.

ಕಲ್ಲಂಗಡಿ ಮತ್ತು ಅಲೋವೆರಾ ಲೋಳೆ

ಬಿಸಿಲಿನಿಂದ ಸುಟ್ಟ ಗಾಯ, ಕಲೆಗಳು, ಮೊಡವೆಗಳಿಂದಾಗುವ ಉರಿಯೂತವನ್ನು ಅಲೋವೆರಾ ಕಡಿಮೆ ಮಾಡುವುದು. ಇದು ನೈಸರ್ಗಿಕ ಮಾಯಿಶ್ಚರೈಸರ್. ಇದು ಚರ್ಮವನ್ನು ತೇವಾಂಶದಿಂದ ಇಡುತ್ತದೆ. ಅಲೋವೆರಾದ ಎಲೆ ಕತ್ತರಿಸಿಕೊಂಡು ತಾಜಾ ಲೋಳೆ ತೆಗೆಯಿರಿ. ಈಗ ಒಂದು ಚಮಚ ಕಲ್ಲಂಗಡಿ ರಸ ಮತ್ತು ಒಂದು ಚಮಚ ಅಲೋವೆರಾ ಲೋಳೆ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ. 15 ನಿಮಿಷ ಹಾಗೆ ಬಿಡಿ. ಬಳಿಕ ನೀರಿನಿಂದ ತೊಳೆಯಿರಿ.

ಕಲ್ಲಂಗಡಿ ಮತ್ತು ಪುದೀನಾ ಎಲೆಗಳು

ಪುದೀನಾ ಎಲೆಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಚರ್ಮ ಸ್ವಚ್ಛಗೊಳಿಸಲು, ಸಂಕೋಚನ, ಪೋಷಣೆ ಮತ್ತು ಮೊಶ್ಚಿರೈಸ್ ಮಾಡಲು ಇದನ್ನು ಬಳಸಲಾ-ಗುತ್ತದೆ. ಒಂದು ಹಿಡಿ ಪುದೀನಾ ಎಲೆಗಳನ್ನು ತೆಗೆದುಕೊಳ್ಳಿ ಮತ್ತು ಅದನ್ನು ರುಬ್ಬಿಕೊಳ್ಳಿ. 2-3 ಚಮಚ ಕಲ್ಲಂಗಡಿ ಅಥವಾ ಅದರ ರಸ ತೆಗೆದುಕೊಂಡು ಅದನ್ನು ಪುದೀನಾ ಪೇಸ್ಟ್ ಗೆ ಹಾಕಿ ಸರಿಯಾಗಿ ಮಿಶ್ರಣ ಮಾಡಿ. ಇದನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳೀ. 20-30 ನಿಮಿಷ ಕಾಲ ಹಾಗೆ ಬಿಡಿ. 30 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.

Leave a Reply

Your email address will not be published. Required fields are marked *