‘ಟ್ರು ಕಾಲರ್’ ಆ್ಯಪ್ ನಿಮ್ಮ ಹತ್ರ ಇದ್ದರೆ ಇದನ್ನು ಓದಲೇ ಬೇಕು

‘ಟ್ರು ಕಾಲರ್’ ಆ್ಯಪ್ ನಿಮ್ಮ ಹತ್ರ ಇದ್ದರೆ ಇದನ್ನು ಓದಲೇ ಬೇಕು

ನಮಗೆ ಕರೆ ಮಾಡಿದವರ ಮಾಹಿತಿಯನ್ನೊದಗಿಸುವ ಟ್ರು ಕಾಲರ್ ಆ್ಯಪ್ ಯಾರಿಗೆ ಗೊತ್ತಿಲ್ಲ? ಇತ್ತೀಚಿಗಷ್ಟೇ ಅದು ಭಾರತೀಯ ಪೇಮೆಂಟ್ಸ್ ಸ್ಟಾರ್ಟ್‌ಅಪ್ ‘ಚಿಲ್ಲರ್’ನ್ನು ಸ್ವಾಧೀನ ಪಡಿಸಿಕೊಂಡಿದೆ. ದೇಶದಲ್ಲಿ ಕಂಪನಿಯ ಪೇಮೆಂಟ್ ವ್ಯವಹಾರವನ್ನು ಹೆಚ್ಚಿಸುವುದು ಈ ಸ್ವಾಧೀನ ಕ್ರಮದ ಉದ್ದೇಶವಾಗಿದೆ. ಸ್ವೀಡನ್ ಮೂಲದ ಟ್ರು ಕಾಲರ್ ಹಾಲಿ ಭಾರತದಲ್ಲಿ 15 ಕೋಟಿ ಬಳಕೆದಾರರನ್ನು ಹೊಂದಿದೆ.

ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಗುರುತಿಸುವುದು, ಕರೆಗಳನ್ನು ಬ್ಲಾಕ್ ಮಾಡುವುದು ಮತ್ತು ಸ್ಪಾಮರ್‌ಗಳನ್ನು ನಿವಾರಿಸುವುದು ಈ ಆ್ಯಪ್‌ನ ಮುಖ್ಯ ವೈಶಿಷ್ಟಗಳಾಗಿವೆ. ಆದರೆ ಇವುಗಳ ಹೊರತಾಗಿ ಬಳಕೆದಾರರಿಗಾಗಿ ಈ ಆ್ಯಪ್ ಇನ್ನೂ ಹಲವಾರು ಕೆಲಸಗಳನ್ನು ಮಾಡುತ್ತದೆ. ವೀಡಿಯೊ ಕಾಲ್‌ಗಳು,ಫ್ಲಾಷ್ ಮೆಸೇಜ್‌ಗಳ ರವಾನೆ ಇತ್ಯಾದಿಗಳು ಇವುಗಳಲ್ಲಿ ಸೇರಿವೆ.

ಈ ಆ್ಯಪ್‌ನ,ಹೆಚ್ಚಿನವರಿಗೆ ಗೊತ್ತಿರದ ಅಂತಹ 12 ವೈಶಿಷ್ಟಗಳ ಕುರಿತು ಮಾಹಿತಿ ಇಲ್ಲಿದೆ……

ನಿಮ್ಮದೇ ಸ್ವಂತ ಪ್ರೊಫೈಲ್ ಸೃಷ್ಟಿಸಿ

ಟ್ರುಕಾಲರ್‌ನೊಂದಿಗೆ ನೀವು ಆರಂಭಿಸುವಾಗ ನೀವು ನಿಮ್ಮ ಸ್ವಂತ ಪ್ರೊಫೈಲ್ ಸೃಷ್ಟಿಸಬಹುದು ಮತ್ತು ನಿಮಗೆ ಬೇಕಾದಂತೆ ಅದನ್ನು ರೂಪಿಸಿಕೊಳ್ಳಬಹುದು. ನಿಮ್ಮ ಭಾವಚಿತ್ರ,ಹೆಸರು ಮತ್ತು ವಿಳಾಸ,ಇ-ಮೇಲ್ ಐಡಿ ಅಥವಾ ವೆಬ್‌ಸೈಟ್‌ನಂತಹ ಹೆಚ್ಚುವರಿ ವಿವರಗಳನ್ನು ಅದಕ್ಕೆ ಸೇರಿಸಬಹುದು. ನೀವು ನಿಮ್ಮ ಟ್ರುಕಾಲರ್ ಪ್ರೊಫೈಲ್‌ನ್ನು ನಿಮ್ಮ ಗೂಗಲ್ ಅಥವಾ ಫೇಸ್‌ಬುಕ್ ಖಾತೆಗಳೊಂದಿಗೂ ಜೋಡಿಸಬಹುದು. ನಿಮಗೆ ನಿಮ್ಮ ಖಾಸಗಿತನದ ಬಗ್ಗೆ ಕಾಳಜಿಯಿದ್ದರೆ ನೀವು ಆ್ಯಪ್‌ನಲ್ಲಿಯ ಜನರಲ್ ಸೆಟಿಂಗ್ಸ್‌ಗೆ ಹೋಗಿ ನಿಮ್ಮ ಪ್ರೊಫೈಲ್‌ನ್ನು ಯಾರು ನೋಡಬಹುದು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬಹುದು.

ಜನರನ್ನು ‘ಸ್ಪಾಮ್’ ಎಂದು ಗುರುತಿಸಿ

ಕರೆಗಳನ್ನು ಮಾಡಿ ತಮ್ಮ ಸ್ಕೀಮ್‌ಗಳು ಮತ್ತು ಆಫರ್‌ಗಳ ಪ್ರವರ ಹೇಳಿಕೊಂಡು ನಿಮಗೆ ಕಿರಿಕಿರಿಯನ್ನುಂಟು ಮಾಡುವವರಿಂದಾಗಿ ಬೇಸತ್ತಿದ್ದರೆ ಟ್ರುಕಾಲರ್‌ನೊಂದಿಗೆ ನೀವು ಅವರನ್ನು ನಿರ್ಬಂಧಿಸಬಹುದು. ಯಾವುದೇ ಒಂದು ಸಂಖ್ಯೆಯನ್ನು ಹಲವಾರು ಜನರು ನಿರ್ಬಂಧಿಸಿದ್ದರೆ ಆ ಸಂಖ್ಯೆಯಿಂದ ನಿಮಗೆ ಕರೆ ಬಂದಾಗ ಸ್ಪಾಮರ್‌ಗಳ ಬಗ್ಗೆ ಸೂಚನೆ ನೀಡಲು ಟ್ರುಕಾಲರ್ ನಿಮಗೆ ಕೆಂಪು ಬಣ್ಣದ ಕಾಂಟ್ಯಾಕ್ಟ್ ಕಾರ್ಡ್‌ನ್ನು ತೋರಿಸುತ್ತದೆ.

ನಿಮ್ಮ ಫೋನ್‌ನ ಡಾಟಾ ಬಳಸದೆಯೂ ನಿಮಗೆ ಕರೆ ಮಾಡುತ್ತಿರುವವರನ್ನು ಗುರುತಿಸಿ

ನೀವು ಅಂತರ್ಜಾಲದೊಂದಿಗೆ ಸಂಪರ್ಕ ಹೊಂದಿಲ್ಲದಿದ್ದಾಗ ತಾನು ಸೂಕ್ತವಾಗಿ ಕಾರ್ಯ ನಿರ್ವಹಿಸಲು ಡಾಟಾ ಸಂಪರ್ಕ ಅಗತ್ಯ ಎಂದು ಟ್ರುಕಾಲರ್ ನಿಮಗೆ ಸೂಚಿಸಬಹುದು. ಆದರೆ ಅದು ಒಂದು ಬಾರಿ ಸಂಖ್ಯೆಯನ್ನು ಗುರುತಿಸಿದ್ದರೆ ನೀವು ಡಾಟಾ ಸಂಪರ್ಕದಲ್ಲಿರಲಿ, ಇಲ್ಲದಿರಲಿ…ಅದು ಆ ಸಂಖ್ಯೆ ಯಾರದ್ದೆನ್ನುವುದನ್ನು ತೋರಿಸುತ್ತದೆ.

ವೀಡಿಯೊ ಕರೆಗಳನ್ನು ಮಾಡಿ

ಹೌದು,ಟ್ರುಕಾಲರ್ ಮೂಲಕ ವೀಡಿಯೊ ಕರೆಗಳನ್ನು ಮಾಡಲು ಸಾಧ್ಯವಿದೆ. ಕರೆಯನ್ನು ಗೂಗಲ್‌ನ ವೀಡಿಯೊ ಕಾಲಿಂಗ್ ಆ್ಯಪ್ ‘ಡ್ಯುಯೊ’ದ ಮೂಲಕ ಮಾಡಲಾಗುತ್ತದೆ. ಹೀಗಾಗಿ ನೀವು ಆ ಆ್ಯಪ್‌ನ್ನೂ ನಿಮ್ಮ ಫೋನ್‌ನಲ್ಲಿ ಅಳವಡಿಸಿಕೊಳ್ಳಬೇಕಾಗುತ್ತದೆ. ಟ್ರೂಕಾಲರ್‌ನಲ್ಲಿ ನೀವು ಕರೆ ಮಾಡಬೇಕಾಗಿರುವ ವ್ಯಕ್ತಿಯ ಎದುರಿನಲ್ಲಿರುವ ‘ಇನ್‌ಫಾರ್ಮೇಷನ್’ಐಕಾನ್‌ನ್ನು ಆಯ್ಕೆ ಮಾಡಿದರೆ ತೆರೆದುಕೊಳ್ಳುವ ಪುಟದಲ್ಲಿ ಕರೆ,ಎಸ್‌ಎಂಎಸ್,ವೀಡಿಯೊ ಕರೆ,ಎಡಿಟ್ ಮತ್ತು ಬ್ಲಾಕ್‌ನ ಆಯ್ಕೆಗಳಿರುತ್ತವೆ. ವೀಡಿಯೊ ಕಾಲ್‌ನ್ನು ಆಯ್ಕೆ ಮಾಡಿಕೊಂಡರೆ ಟ್ರುಕಾಲರ್ ಸ್ವಯಂ ಆಗಿ ಡ್ಯುಯೊದ ಮೂಲಕ ಆ ವ್ಯಕ್ತಿಗೆ ಕರೆಯನ್ನು ಮಾಡುತ್ತದೆ.

ಟ್ರುಕಾಲರ್‌ನ್ನು ನಿಮ್ಮ ‘ಡಿಫಾಲ್ಟ್ ಡಯಲರ್’ ಆಗಿ ಸೆಟ್ ಮಾಡಿ

ಇದಕ್ಕಾಗಿ ಆ್ಯಪ್‌ನ್ನು ತೆರೆದು ‘ಹ್ಯಾಂಬರ್ಗರ್’ ಐಕಾನ್‌ನ್ನು ಕ್ಲಿಕ್ ಮಾಡಿ ಸೆಟಿಂಗ್ಸ್‌ಗೆ ಹೋಗಿ. ಜನರಲ್ ಆಯ್ಕೆಯನ್ನು ಕ್ಲಿಕ್ ಮಾಡಿ ‘ಮಿಸ್ಡ್ ಕಾಲ್ ನೋಟಿಫಿಕೇಷನ್ಸ್’ಗೆ ಸ್ಕ್ರೋಲ್ ಡೌನ್ ಮಾಡಿ. ಇದನ್ನು ನೀವು ಕ್ರಿಯಾಶೀಲಗೊಳಿಸಿದಾಗ ನಿಮ್ಮ ಡಿಫಾಲ್ಟ್ ಡಯಲರ್ ಆಗಲು ಆ್ಯಪ್ ವಿವಿಧ ಅನುಮತಿಗಳನ್ನು ನಿಮ್ಮಿಂದ ಕೇಳುತ್ತದೆ

ಟ್ರುಕಾಲರ್‌ನ್ನು ನಿಮ್ಮ ‘ಡಿಫಾಲ್ಟ್ ಮೆಸೇಜಿಂಗ್ ’ಆ್ಯಪ್‌ನ್ನಾಗಿ ಮಾಡಿ

ಇದನ್ನು ಕ್ರಿಯಾಶೀಲಗೊಳಿಸುವಂತೆ ಟ್ರುಕಾಲರ್ ನಿಮ್ಮನ್ನು ಹಲವಾರು ಬಾರಿ ಉತ್ತೇಜಿಸುತ್ತಿರುತ್ತದೆ. ಟ್ರುಕಾಲರ್‌ನ್ನು ನಿಮ್ಮ ಡಿಫಾಲ್ಟ್ ಮೆಸೇಜಿಂಗ್ ಆ್ಯಪ್‌ನ್ನಾಗಿ ಮಾಡಿಕೊಂಡರೆ ನೀವು ಸ್ಪಾಮ್ ಮೆಸೇಜ್‌ಗಳು,ಅಪರಿಚಿತ ಸಂದೇಶಗಳನ್ನು ರವಾನಿಸಿದವರನ್ನು ಗುರುತಿಸಬಹುದು ಮತ್ತು ಸ್ಪಾಮ್,ಟೆಲಿಮಾರ್ಕೆಟಿಂಗ್ ಕರೆಗಳು ಇತ್ಯಾದಿಗಳನ್ನು ನಿರ್ಬಂಧಿಸಬಹುದು.

ಸಂಖ್ಯೆಗಳು/ಸಂಪರ್ಕಗಳನ್ನು ಹೆಸರು,ಇ-ಮೇಲ್ ಐಡಿ ಗಳೊಂದಿಗೆ ಸರ್ಚ್ ಮಾಡಿ

ಟ್ರುಕಾಲರ್ ಆ್ಯಪ್‌ನ ಬಳಕೆ ನಂಬರ್‌ಗಳನ್ನು ನಿರ್ಬಂಧಿಸಲು ಮತ್ತು ಸ್ಪಾಮರ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಮಾತ್ರ ಸೀಮಿತವಾಗಿಲ್ಲ, ಅದು ಡೈರೆಕ್ಟರಿಯೂ ಆಗಿದೆ. ನೀವು ಯಾವುದೇ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಸರ್ಚ್ ಮಾಡಲು ಬಯಸಿದ್ದರೆ ಆ ವ್ಯಕ್ತಿಯ ಹೆಸರನ್ನು ಟೈಪ್ ಮಾಡಿದರೆ ಸಾಕು,ಟ್ರುಕಾಲರ್ ತನ್ನ ದತ್ತಾಂಶ ಸಂಗ್ರಹದಿಂದ ಆ ವ್ಯಕ್ತಿಯ ಸಂಖ್ಯೆಯನ್ನು ಹೆಕ್ಕಿ ನಿಮಗೆ ತೋರಿಸುತ್ತದೆ. ಇದೇ ರೀತಿ ಇ-ಮೇಲ್ ಐಡಿಗಳನ್ನು ಬಳಸಿ ಸಂಖ್ಯೆಗಳನ್ನು ಹುಡುಕಬಹುದು. ಟ್ರುಕಾಲರ್‌ನ ಸರ್ಚ್ ಆಯ್ಕೆಯು ವಿವಿಧ ವಿಮಾನ ಯಾನ ಸಂಸ್ಥೆಗಳು,ರೈಲ್ವೆ,ಆರೋಗ್ಯ ಸೇವೆಗಳು,ಬ್ಯಾಂಕುಗಳು,ಹೋಟೆಲ್‌ಗಳು ಇತ್ಯಾದಿಗಳ ನಂಬರ್‌ಗಳನ್ನೂ ಸೇವ್ ಮಾಡಿಕೊಂಡಿರುತ್ತದೆ.

ಆ್ಯಪ್‌ನಿಂದ ನಿಮ್ಮ ನಂಬರ್‌ನ್ನು ತೆಗೆದುಹಾಕಿ

ಟ್ರುಕಾಲರ್‌ನ ದತ್ತಾಂಶ ಕೋಶದಲ್ಲಿ ನಿಮ್ಮ ನಂಬರ್ ಕಾಣಿಸಿಕೊಳ್ಳಬಾರದು ಎಂದು ಬಯಸಿದ್ದರೆ ನೀವು https:/www.truecaller.com/unlisting ಗೆ ಭೇಟಿ ನೀಡಬೇಕಾಗುತ್ತದೆ. ನಿಮ್ಮ ಹೆಸರನ್ನು ಕಂಟ್ರಿ ಕೋಡ್‌ನೊಂದಿಗೆ ಟೈಪ್ ಮಾಡಿ ‘ಅನ್‌ಲಿಸ್ಟ್ ಫೋನ್ ನಂಬರ್’ನ್ನು ಕ್ಲಿಕ್ ಮಾಡಿದರೆ ನಿಮ್ಮ ಕೆಲಸವಾಗುತ್ತದೆ. ಆದರೆ ಹಾಗೆ ಮಾಡಿದರೆ ಆ್ಯಪ್ ಕೂಡ ನಿಮ್ಮ ಸಾಧನದಿಂದ ಮಾಯವಾಗುತ್ತದೆ.

ಆನ್‌ಲೈನ್‌ನಲ್ಲಿ ಯಾರಿದ್ದಾರೆ ಮತ್ತು ‘ಲಾಸ್ಟ್ ಸೀನ್’ನ್ನು ನೋಡಿ

ಆ್ಯಪ್‌ನ್ನು ತೆರೆದು ಕಾಂಟ್ಯಾಕ್ಟ್‌ನ ಮುಂದಿರುವ ಇನ್‌ಫಾರ್ಮೇಷನ್ ಐಕಾನ್‌ನ್ನು ಕ್ಲಿಕ್ ಮಾಡಿ. ನಿಮಗೆ ಕಾಂಟ್ಯಾಕ್ಟ್‌ನ ಎಲ್ಲ ವಿವರಗಳಿರುವ ಕಾಂಟ್ಯಾಕ್ಟ್ ಕಾರ್ಡ್ ಕಾಣುತ್ತದೆ. ಇಲ್ಲಿ ವ್ಯಕ್ತಿಯ ಹೆಸರು ಮತ್ತು ಟ್ಯಾಗ್‌ನ ಕೆಳಗೆ ಅವರು ಕೊನೆಯ ಬಾರಿ ಯಾವಾಗ ಆನಲೈನ್‌ನಲ್ಲಿದ್ದರು ಮತ್ತು ಅವರು ಕರೆಯಲ್ಲಿದ್ದಾರೆಯೇ ಎನ್ನುವುದನ್ನು ನೀವು ನೋಡಬಹುದು. ಇದನ್ನು ನಿಮ್ಮ ಕಾಂಟ್ಯಾಕ್ಟ್ ಕಾರ್ಡ್‌ನಿಂದ ಡಿಸೇಬಲ್ ಮಾಡಲು ಬಯಸಿದ್ದರೆ ಸೆಟಿಂಗ್ಸ್‌ಗೆ ಹೋಗಿ ಜನರಲ್ ಅನ್ನು ಆಯ್ಕೆ ಮಾಡಿಕೊಂಡು ‘ಅವೆಲೇಬಿಲಿಟಿ’ಯನ್ನು ಕ್ಲಿಕ್ ಮಾಡಿ.

ಎಸ್‌ಎಂಎಸ್‌ಗೆ ಸ್ಪಾಮ್ ಫೋಲ್ಡ್‌ರ್ ನಿರ್ಮಿಸಿ

ಆ್ಯಪ್‌ನ್ನು ತೆರೆದು ಕೆಳಗೆ ಎಡಬದಿಯಲ್ಲಿರುವ ಮೆಸೇಜ್ ಐಕಾನ್‌ನ್ನು ಕ್ಲಿಕ್ ಮಾಡಿ ಸ್ಪಾಮ್ ಪ್ರೊಟೆಕ್ಷನ್ ಅನ್ನು ಕ್ರಿಯಾಶೀಲಗೊಳಿಸಿ. ಇದರೊಂದಿಗೆ ಟ್ರುಕಾಲರ್ ನಿಮ್ಮ ಡಿಫಾಲ್ಟ್ ಮೆಸೇಜ್ ಆ್ಯಪ್ ಆಗುತ್ತದೆ ಎಂಬ ಸಂದೇಶ ಕಾಣಿಸಿಕೊಳ್ಳುತ್ತದೆ. ಕಾರ್ಡ್‌ನಲ್ಲಿರುವ ‘ಕಂಟಿನ್ಯೂ’ಅನ್ನು ಒತ್ತಿ. ಈಗ ಟ್ರುಕಾಲರ್ ಮೆಸೇಜಿಂಗ್ ಆ್ಯಪ್ ಬದಲಾವಣೆಯನ್ನು ಸೂಚಿಸಲು ಇನ್ನೊಂದು ಕಾರ್ಡ್‌ನ್ನು ನಿಮಗೆ ತೋರಿಸುತ್ತದೆ. ಮುಂದೆ ಸಾಗಲು ‘ಓಕೆ’ಯನ್ನು ಕ್ಲಿಕ್ ಮಾಡಿ.

ಹಣಪಾವತಿಗಳನ್ನು ಮಾಡಿ

‘ಟ್ರುಕಾಲರ್ ಪೇ’ಗಾಗಿ ಈ ಆ್ಯಪ್ ಎಚ್‌ಡಿಎಫ್‌ಸಿ, ಐಸಿಐಸಿಐ, ಕೋಟಕ್ ಮಹೀಂದ್ರಾ ಮತ್ತು ಎಕ್ಸಿಸ್ ಸೇರಿದಂತೆ ಹಲವಾರು ಬ್ಯಾಂಕುಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಆ್ಯಪ್ ಬಳಕೆದಾರರು ತಮ್ಮ ಸ್ವಂತ ವರ್ಚುವಲ್ ಪೇಮೆಂಟ್ ವಿಳಾಸವನ್ನು ಸೃಷ್ಟಿಸಿಕೊಳ್ಳಬಹುದು ಮತ್ತು ನಂತರ ಯುಪಿಐ ಬಳಸಿ ಹಣವನ್ನು ರವಾನಿಸಬಹುದು ಅಥವಾ ಸ್ವೀಕರಿಸಬಹುದು. ಇದರ ಮೂಲಕ ಬಳಕೆದಾರರು ಪ್ರಿಪೇಡ್ ಅಥವಾ ಪೋಸ್ಟ್‌ಪೇಡ್ ರಿಚಾರ್ಜ್ ಕೂಡ ಮಾಡಿಕೊಳ್ಳಹುದು.

ಫ್ಲಾಷ್ ಸಂದೇಶಗಳನ್ನು ರವಾನಿಸಿ

ಇದಕ್ಕಾಗಿ ನಿಮ್ಮ ಟ್ರುಕಾಲರ್ ಕಾಲ್ ಲಾಗ್‌ನಲ್ಲಿ ವ್ಯಕ್ತಿಯ ಹೆಸರಿನ ಎದುರಿನಲ್ಲಿರುವ ಮಿಂಚಿನಂತಹ ಐಕಾನ್‌ನ್ನು ಟ್ಯಾಪ್ ಮಾಡಿ. ನಿಮ್ಮ ಸಂದೇಶವನ್ನು ಟೈಪ್ ಮಾಡಿ ‘ಸೆಂಡ್’ನ್ನು ಒತ್ತಿ. ನೀವು ಕಳುಹಿಸಿರುವ ವ್ಯಕ್ತಿಯು ಮುಂದಿನ 60 ಸೆಕೆಂಡ್‌ಗಳವರೆಗೆ ನಿಮ್ಮ ಫ್ಲಾಷ್ ಸಂದೇಶವನ್ನು ವೀಕ್ಷಿಸಬಹುದು.

Leave a Reply

Your email address will not be published.