ಕನ್ನಡದ ನಟ ಚೇತನ್ ವಿರುದ್ಧ ಕಿಚ್ಚ ಸುದೀಪ್ ಗರಂ

ಕನ್ನಡದ ನಟ ಚೇತನ್ ವಿರುದ್ಧ ಕಿಚ್ಚ ಸುದೀಪ್ ಗರಂ

‘ಆ ದಿನಗಳು’ ಖ್ಯಾತಿಯ ಚೇತನ್‌ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಸ್ಟಾರ್‌ ನಟರ ಬಗ್ಗೆಯೂ ಒಂದು ಪೋಸ್ಟ್ ಹಾಕಿದ್ದರು. ಇದೀಗ ಆ ಕುರಿತು ನಟ ‘ಕಿಚ್ಚ’ ಸುದೀಪ್‌ ಪ್ರತಿಕ್ರಿಯೆ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲೀಗ ಸಿನಿಮಾ ವಿಚಾರಗಳಿಗಿಂತ ಬೇರೆ ಬೇರೆ ವಿಚಾರಗಳೇ ಹೆಚ್ಚು ಪ್ರಚಲಿತದಲ್ಲಿವೆ. ಚಂದನವನದಲ್ಲಿ ಡ್ರಗ್ ಜಾಲ ಇದೆ ಎಂಬ ಮಾಹಿತಿ ಬಹಿರಂಗಗೊಂಡ ಮೇಲಂತೂ ಸಾಕಷ್ಟು ಪರ-ವಿರೋಧ ಹೇಳಿಕೆಗಳು ಬರುತ್ತಲೇ ಇವೆ.

ಇದೀಗ ‘ಆ ದಿನಗಳು’ ಖ್ಯಾತಿಯ ನಟ ಚೇತನ್‌ ಬರೀ ಡ್ರಗ್ ಮಾತ್ರವಲ್ಲದೆ, ಗುಟ್ಕಾ/ಪಾನ್ ಮಸಾಲಾ, ಜೂಜು (ರಮ್ಮಿ) ಕುರಿತ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಸ್ಟಾರ್ ನಟರ ಬಗ್ಗೆ ಮಾತನಾಡಿದ್ದರು. ಇದೀಗ ಆ ಬಗ್ಗೆ ನಟ ‘ಕಿಚ್ಚ’ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ.

ನೆನ್ನೆ ತುಮಕೂರಿನ ಸಿದ್ಧಗಂಗ ಮಠಕ್ಕೆ ಸುದೀಪ್‌ ಭೇಟಿ ನೀಡಿದ್ದರು. ಆ ವೇಳೆ ಮಾಧ್ಯಮದವರ ಜೊತೆ ಮಾತನಾಡುವಾಗ ಚೇತನ್‌ ಅವರ ಫೇಸ್‌ಬುಕ್ ಪೋಸ್ಟ್‌ ಬಗ್ಗೆ ಪ್ರಶ್ನೆ ಎದುರಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ‘ಕಿಚ್ಚ’ ಸುದೀಪ್, ‘ಅವರು ನನ್ನ ಬಗ್ಗೆ ಮಾತಾಡಿರಲ್ಲ.

ಬಹುಶಃ ಮೋದಿ ಬಗ್ಗೆ ಮಾತಾಡಿರುತ್ತಾರೆ. ಯಾಕೆಂದರೆ, ಇದಕ್ಕೆಲ್ಲ ಅನುಮತಿ ನೀಡುವುದು ಕೇಂದ್ರ ಸರ್ಕಾರ ಅಲ್ಲವೇ? ನಾನು ಇದರಲ್ಲಿ ಸಣ್ಣ ಅಳಿಲಿನಂತೆ ಎನ್ನಬಹುದು. ನಾನು ಅದರಿಂದ ಬರುವ ದುಡ್ಡನ್ನು ತಂದು ಯಾವುದೋ ಒಂದು ಒಳ್ಳೆಯ ಕೆಲಸಕ್ಕೇ ಹಾಕಿರುತ್ತೇನೆ. ಬೇರೆಯದಕ್ಕೆ ಅಲ್ಲ’ ಎಂದು ಹೇಳಿದ್ದಾರೆ.

‘ಅವರಿಗೆ ನೇರವಾಗಿ ಹೇಳೋಕೆ ಆಗದೆ, ನನ್ನ ಹೆಸರನ್ನು ತಗೋಳಕೆ ಆಗದೆ ಒದ್ದಾಡ್ತಾ ಇದ್ದಾರೆ. ಹೇಳೋರು ಯಾವಾಗಲೂ ನೇರವಾಗಿಯೇ ಹೇಳಬೇಕು. ನಾವು ಕೂಡ ತುಂಬ ಸೇವೆ ಮಾಡಿದ್ದೇವೆ. ಅದರ ಬಗ್ಗೆಯೂ ಗಮನಕೊಟ್ಟು ಕೇಳಬೇಕು. ಚಿಕ್ಕದಾಗಿ ಏನೋ ಒಂದು ಸೌಂಡು ಬರಹುದು’ ಎಂದು ಸುದೀಪ್‌ ತಿಳಿಸಿದ್ದಾರೆ.

ನಟ ಚೇತನ್‌, ತಮ್ಮ ಫೇಸ್‌ಬುಕ್‌ನಲ್ಲಿ ಈ ಕುರಿತು ಬರೆದುಕೊಂಡಿದ್ದರು. ‘ಪ್ರಸ್ತುತವಾಗಿ ಎಲ್ಲರ ಗಮನ ಮಾದಕವಸ್ತುಗಳನ್ನು ಖಾಸಗಿಯಾಗಿ ಬಳಸುವ ಚಲನಚಿತ್ರ ಸಿಬ್ಬಂದಿ ಮತ್ತು ನಟರನ್ನು ಬಹಿರಂಗಪಡಿಸುವುದರ ಮೇಲಿದೆ.

ಕೇವಲ ಹಣಕ್ಕಾಗಿ ಮದ್ಯ (ಸೋಡ), ಗುಟ್ಕಾ/ಪಾನ್ ಮಸಾಲಾ, ಜೂಜು (ರಮ್ಮಿ), ಇನ್ನು ಇತ್ಯಾದಿಗಳ ಬಗ್ಗೆ ಮುಕ್ತವಾಗಿ ಜಾಹೀರಾತು ನೀಡುವ ‘ಸ್ಟಾರ್’ಗಳ ಮೇಲೆ ಬೆರಳು ತೋರಿಸದಿರುವುದು ಮೋಸವಲ್ಲವೇ? ಇವರು ಸಾಮಾಜಿಕ ದುಷ್ಕೃತ್ಯಗಳ ರಾಯಭಾರಿಗಳಲ್ಲವೇ’ ಎಂದು ಅವರು ಪ್ರಶ್ನೆ ಮಾಡಿದ್ದರು.

Leave a Reply

Your email address will not be published. Required fields are marked *